: ಸಖ್ಯಮೇಧ: December 2013

December 23, 2013

ಮಳೆ

                       "ಅಯ್ಯೋ ಮಾರಾಯಾ ಇನ್ನೂ ಎದ್ದಿದ್ದಿಲ್ಯನ... ಯೋಳೂವರೆ ಆತೋ ಮಾರಾಯಾ...." ಅಕ್ಕ ಕೂಗುತ್ತಿದ್ದಂತೆ ಕಾಣುತ್ತಿದ್ದ ಕನಸಿಗೆ ಭಂಗವಾಗಿ ಎಚ್ಚರವಾಯಿತು. ಕಣ್ಣು ತೆಗೆದರೆ ಮುಂಜಾನೆಯ ಕೋಲು ಬಿಸಿಲು ಕಣ್ಣಿಗೆ ರಾಚಿ ಇನ್ನಷ್ಟು ಆಲಸ್ಯ ತಂದಿತು . ಇವತ್ತೂ ಶಾಲೆಗೆ ರಜೆ ಮಾಡೋಣವೆಂದರೆ ಇವಾಗಾಗಲೇ ಎರಡು ದಿನ ರಜೆ ಮಾಡಿಯಾಗಿದೆ .ಇವತ್ತೂ ಹಾಗೇ ಮಾಡುತ್ತೇನೆಂದರೆ ಅಕ್ಕ ಬಡಿಗೆ ತೆಗೆದುಕೊಂಡಾಳು!
.                        ಹಾಸಿಗೆ ಸುತ್ತಿ ಅಲ್ಲೇ ಬದಿಗಿಟ್ಟು ಒಂದು ಟವೆಲ್ ಸುತ್ತಿಕೊಂಡು ಹೊರನಡೆದಾಗ ಅಕ್ಕ  ಒಲೆಗೆ ಸೌದೆ ತುಂಬುತ್ತಿದ್ದಳು .ಪ್ರಾತರ್ವಿಧಿ ಮುಗಿಸಿ ಸ್ನಾನ ಮಾಡಲು ಹಂಡೆಗೆ ಕೈ ಹಾಕಿದಾಗ ಯಾಕೋ ಇನ್ನಷ್ಟು ಬಿಸಿ ಬೇಕು ಎನ್ನಿಸಿತು .ಆದರೆ ಇನ್ನಷ್ಟು ಬೆಂಕಿ ಉರಿಸಲು ಆಲಸ್ಯವೆನಿಸಿ ಹಾಗೇ ಸ್ನಾನ ಮಾಡಿ ಕಾಟಾಚಾರಕ್ಕೆಂಬಂತೆ ಸಂಧ್ಯವಂದನೆ ಮುಗಿಸಿ ತಿಂಡಿ ತಿನ್ನಲು ಬಂದೆ .ಅದಾಗಲೇ ಎಂಟುವರೆಯಾಗಿತ್ತು .ಅಕ್ಕ ದೋಸೆ ಬಡಿಸಿ "ಬೇಗ ತಿಂದು ಹೊರಡು .ಇಲ್ಲದ್ರೆ ಶಾಲೇಲಿ ಹೊರಗೇ ನಿಂತ್ಕಳಕಾಗ್ತು" ಎಂದು ಎಚ್ಚರಿಕೆ ಬೇರೆ ಕೊಟ್ಟಳು .ಏನೂ ಹೇಳದೇ ನನ್ನಷ್ಟಕ್ಕೆ ತಯಾರಾಗಿ  ಶಾಲೆಗೆ ನಡೆದೆ .ಪ್ರಾರ್ಥನೆ ಮಾಡುವಾಗ ಆಕಳಿಕೆಗೆ ಪ್ರತ್ಯುತ್ತರವಾಗಿ ಶಿಕ್ಷಕಿಯ ದುರುಗುಡುವ ನೋಟ .ಮೊದಲ ಪೀರಿಯಡ್ ಸುಮಂಗಲಾ ಮೇಡಮ್ರದ್ದು .ಕ್ಲಾಸಿನಲ್ಲ ಕುಳಿತುಕೊಳ್ಳಲೂ ಬಹಳ ಪ್ರಯಾಸಪಡುತ್ತಿದ್ದೆ ನಾನು .
.             ಮೇಡಂ ಮೊದಲು ಮಾಡಿದ ಕೆಲಸ ಹೋಮ್ವರ್ಕ್ ಪರಿಶೀಲಿಸಿದ್ದು .ಎಲ್ಲರೂ ಪಟ್ಟಿ ಇಟ್ಟು ನನ್ನನ್ನು ನೋಡಿ ಮುಸಿನಗುತ್ತಿದ್ದರು .ಎಂದಿನಂತೆ ನನಗೆ ಟೀಚರ್ ಬಯ್ಗುಳ. ಕೈ ಮುಂದಿಟ್ಟೆ .ಸಂಜೆತನಕ ನೆನಪಿರುವಂತಹ ಒಂದೇ ಒಂದು ಬೆತ್ತದ ಛಾಟಿ. ಕೈ ಮುಷ್ಟಿಕಟ್ಟಿ ಮತ್ತೆ ಜಾಗದಲ್ಲಿ ಕುಳಿತೆ .ಶಾಲೆ ಬಿಟ್ಟು ಬರುವಾಗ ಪಕ್ಕದಲ್ಲಿ ಹೋದ ಕಾರೊಂದು ಮೈ ಮೇಲೆ ರಾಡಿ ಎರಚಿತ್ತು . ಶಾಪ ಹಾಕಲೂ ಆಲಸ್ಯ !!
.                    ಬರುವಾಗ ಮರಗಿಡಗಳ. ಸಾಲು.... ಅರ್ಧ ಮೋಡ ಕವಿದಿತ್ತು ...ಕ್ರಮೇಣ ಹನಿಹಾಕಲು ಶುರುವಾಯಿತು .ಅದರೊಡನೆ ಬಿಸಿಲು ಬೆರೆತು ಕಾಮನಬಿಲ್ಲು ಮೂಡಿತು .ಚಿಟ್ಟೆಗಳು ಮಧುವಿಗಾಗಿ ಹಾರಿ-ಹಾರಿ ಕುಪ್ಪಳಿಸುತ್ತಿದ್ದವು .ಅತ್ತ ಕಡೆ ದನಗಳ ಗುಂಪೊಂದು ಮಳೆಯಿಂದ ರಕ್ಷಿಸಿಕೊಳ್ಳಲು ಮನೆಗೆ ಓಡುತ್ತಾ ಇತ್ತು .ನೆನೆದ ಮಣ್ಣಿನ ಪರಿಮಳ ಎಲ್ಲೆಡೆ ಹರಡಿತ್ತು .ಯಾಕೋ ಮನ ಕುಣಿದಾಡಿತು .ಆಲಸ್ಯ ಕರಗಿಹೋಯ್ತು .ಆದರೆ ಕಾಲು ಓಡಲಿಲ್ಲ. ಮನ ಬಯಸಿದ್ದು ಈ ಕ್ಷಣವನ್ನು ಇದನ್ನು ಅನುಭವಿಸಬೇಕು ......ಕುಣಿದು ಕುಪ್ಪಳಿಸಿದೆ.....ನನ್ನ ಸಂತೋಷ ನನಗೆ .... ಸಂಜೆವರೆಗೂ ಇಲ್ಲೇ ಇರೋಣ ಎಂದು ತೀರ್ಮಾನಿಸದೆ .ಮೈ ಅರ್ಧ ಒದ್ದೆಯಾಗಿತ್ತು .ಪೂರ್ತಿ ಒದ್ದೆಯಾಗುವ ತವಕ....  ಅಷ್ಟರಲ್ಲಿ ದೊಡ್ಡಪ್ಪನ ಬೈಕ್ ಸದ್ದು.... ನೋಡುತ್ತಿದ್ದಂತೆ ಹತ್ತಿರ ಬಂದು ನಿಲ್ಲಿಸಿದ ."ಇಲ್ಲೇನ್ ಮಾಡ್ತಿದ್ದೆ ಮಳೇಲಿ...ಹೋಪ ಬಾ..." .:( .ತಣ್ಣೀರಲ್ಲಿ ನೆನೆಯುವ ಆಸೆಗೆ ತಣ್ಣೀರೆರಚಿದಂತಾಗಿತ್ತು...ಸಪ್ಪೆ ಮುಖದಿಂದ ಬೈಕ್ ಹತ್ತಿದೆ.. ದೇವರೇ.. ಬೈಕ್ ಕೆಡಬಾರದೇ ಎಂದು ಮನ ಬಯಸುತ್ತಿತ್ತು...