: ಸಖ್ಯಮೇಧ: February 2015

February 19, 2015

ಅಮಾವಾಸ್ಯೆ

ಅಯ್ಯೋ ...!!
ಚಂದ್ರ ಕಾಣೆಯಾಗಿಬಿಟ್ಟಿದ್ದಾನೆ..!!
ಗೆಳತೀ .....
ಹುಡುಕಲೇನು...
ನಿನ್ನ ಕಂಗಳಲ್ಲಿ......!!

ಕೆಂಡಸಂಪಿಗೆ

ಅಮಾವಾಸ್ಯೆ

ಬಳ್ಳಿ...

ಕ ದಪುಗಳು ಕೆಂಪೇರಿ ನೀ ನಾಚಿ ನಗುವಾಗ
ಕಾ ಲಲ್ಲೇ ನಿಂತಲ್ಲೇ ರಂಗೋಲಿ ಬರೆವಾಗ
ಕಿ ರಿದಾದ ನಗುವೊಂದು ಕಣ್ಣಲ್ಲಿ ಕಂಡಾಗ
ಕೀ ಲಿಕೈ ನೀನಾದೆ ಪ್ರೀತಿ ಬಾಗಿಲಿಗೆ....
ಕು ಶಲತೆಯ ಆ ಮಾತು, ಕೇಳುವಿಕೆಗಿಂಪು..
ಕೂ ತಲ್ಲಿ ನಂತಲ್ಲಿ ನಿನ್ನದೇ ನೆನಪು...!
ಕೆ ತ್ತಿಹೆನು ಎದೆಯಲ್ಲಿ ನಿನ್ನ ಹೆಸರನ್ನು ..
ಕೇ ಳಿಲ್ಲಿ ಒಂದುಕ್ಷಣ ಎದೆಬಡಿತವನ್ನು...
ಕೈ ಗೂಸಿನಂತೆಣಿಸಿ ಪ್ರೀತಿಸುವೆನು...
ಕೊ ರಗು ಕರಗಿಸು,
ಪ್ರೀತಿಸೌಧವನು ನೀ ಕಟ್ಟು
ಕೋ ರಿಕೆಯ ಒಪ್ಪಿ ಬಂದಪ್ಪಿ ಸಂತೈಸು...
ಕೌ ತುಕವ ಬದಿಗಟ್ಟಿ ಪ್ರೀತಿ ಸಾಲವ ನೀಡು
ಕಂತುಕಂತುಗಳಲ್ಲಿ ತೀರಿಸುವೆ-ಮುತ್ತುಗಳ..!!
ಕಹಿಬದುಕ ಸಿಹಿಗೊಳಿಸು, ಬಂದುಬಿಡು ನೀ...

ಕೆಂಡಸಂಪಿಗೆ

. . . . . . ಸಖ್ಯಮೇಧ

ಬಾಹುಬಂಧನ

ಬಾಹುಬಂಧನ - ಅದುವೆ - ಭಾವಬಂಧನ!!
ತನುವ ಮಂಥನ-ಮನವು- ನಂದನವನ..!
ಮನದ ಮಿಲನ-ಚಂದ - ಮಂತ್ರಸಮ್ಮೋಹನ..
ನಿನ್ನ ಮನನ- ಹೊಸತು ಭಾವ ಜನನ...!!

ಕೆಂಡಸಂಪಿಗೆ

. . . . . . ಸಖ್ಯಮೇಧ

ಭಾವಾಮೃತ

ಭಾವಾಮೃತವೇ....,

ಚಂದದಾ ಹಣೆಮೇಲೆ ದುಂಡುಬಿಂದಿಯನಿಟ್ಟು
ಕಣ್ಣಲ್ಲೇ ನೀ ನಾಟ್ಯವಾಡುವಾಗ..
ಮುದ್ದುಕ್ಕಿ ಬಂದಿತ್ತು ಭಾವಬಿಂದಿಗೆ ತುಂಬಿ-
ವಾತ್ಸಲ್ಯದಾ ಪ್ರಸವ - ಮನ ಬೀಗಿದಾಗ..!
.
ಪುಟ್ಟಮೂಗಿನ ಮೇಲೆ
ಪಟ್ಟದಾ ಮೂಗುತಿ..
ಪಟ್ಟಕದ ರೀತಿಯಲಿ ಹೊಳೆಯುವಾಗ..
ತುಟ್ಟಿಯಾಯಿತು ಪ್ರೀತಿ; ಕಣ್ಕಟ್ಟಿತೂ ಬೆಳಕು
ಎದೆತಟ್ಟಿ ಒಲವ ಮನೆ ಕಟ್ಟುವಾಗ...!
.
ಅಡಗಿ ಕುಳಿತಿಹ ಕಿವಿಯ
ಬೆಡಗ ಬಣ್ಣಿಸಲೆಂದು
ಮಡಗಿದಾ ಒಡವೆಯಿದು ಕಿವಿಯೋಲೆ ಕಾಣು..!
ಬಿಡುವು ಆದಾಗೆಲ್ಲ ಕೈಯಿಡುತ ಮುಂಗುರುಳ
ಸಡಿಸುತಲಿ ಕಿವಿ ಮೇಲೆ ಇಡುತಲಿರು ನೀ..!
.
ಮಲ್ಲಿಗೆಯ ಹೊತ್ತು ತಾ ಚೆಲ್ಲಾಟವಾಡುತಿಹ
ಜಡೆಯ ಪಲ್ಲಟ ನಿಮಿಷನಿಮಿಷಕೊಮ್ಮೆ..!
ಗಲ್ಲದಾ ಬೊಟ್ಟಿಗೂ ಇಲ್ಲಿರುವ ಕೂದಲಿಗೂ
ಸಲ್ಲುತಿದೆ ಅಚ್ಚು ಕಲ್ಗಪ್ಪು ಬಣ್ಣ..!
....
ಲಜ್ಜೆಗೆಂಪಿನ ಹಿಮ್ಮಡದ
ಮೇಲ್ಜೋತುಬಿದ್ದಿಹ ಗೆಜ್ಜೆಯು..!
ಮುಚ್ಚುಮರೆಯಲಿ ಹುಚ್ಚು ಹಿಡಿಸಿದೆ
ಇಚ್ಛೆ ಹೆಚ್ಚಿದೆ ಮನದಲಿ..!
.
ಕೆಂಡಸಂಪಿಗೆ ...

. . . . . . ಸಖ್ಯಮೇಧ

ಬಳ್ಳಿ

ಅ ನುದಿನವೂ ಹಳೆ ನೆನಪು
ಆ ಕರ್ಷಣೆಯ ಹೊಳಪು
ಇ ರುಳಲ್ಲೂ ನಿನ್ನ ನೆನೆವ
ಈ ಪರಿಯ ಹೊಸ ಹುರುಪು
ಉ ಸಿರಲ್ಲೂ ನಿನ್ನತನ
ಊ ನವಾಗಿಹುದು ಮನ
ಎ ಲ್ಲಿ ದೂರಾಗಿರುವೆ
ಏ ತಕ್ಕೆ ಅಡಗಿರುವೆ
ಐ ಕ್ಯವಾಗುವ ಬೇಗ ಬಂದುಬಿಡು ನೀ...
ಒ ಮ್ಮೆ ನೀ ಬಾ ಸನಿಹ
ಓ ಡಿಸುತ ಈ ವಿರಹ
ಔ ಪಾಸಿಸಿಹೆ ನಿನ್ನ ಹೆಸರ ಅನವರತ...
ಅಂತರಾತ್ಮವು ನಿನ್ನ ಬರಕಾಯುತಿಹುದು...
ಅಹುದು ಆಗಲಿ ಎಂದು ಬಂದುಬಿಡು ನೀ...
.
ಕೆಂಡಸಂಪಿಗೆ

. . . . . . . . ಸಖ್ಯಮೇಧ

ಹೂ...

ಒಮ್ಮೆ ಹೂ ಅರಳುವುದ ನೋಡುವಾಸೆ....
ಗೆಳತೀ ....
ನಕ್ಕುಬಿಡು...

February 05, 2015

ನೀನಿರದೇ....,,,

ಗೆಳತೀ ...,
ನೀನಿರದಿರೆ....

ಖುಷಿನೀಡದು ಶಶಿಯುಷೆಯೂ
ತೃಷೆನೀಗದು ಪೀಯೂಷವೂ
ನಶೆಯೇರದು ನಿಶೆಯಲ್ಲೂ
ದಿಶೆತಪ್ಪಿದೆ ಆಶೆಯದು...
.
    ವಶವಾಗಿಹೆ ಕುಶಲತೆಗೆ
    ಸುಷ್ಮಸುಮಸಮಾಕರ್ಷಣೆಗೆ...
    ಕೃಶವಾಗಿಹೆ ಮನಸೋತಿಹ
    ಹೊಸಭಾವದ ಘರ್ಷಣೆಗೆ...!
ಕೆಂಡಸಂಪಿಗೆ
ಶಿಶಿರ
. . . . . .  . ಸಖ್ಯಮೇಧ

February 04, 2015

ಅವಳು

ಮಂಜಿನೋಕುಳಿ ನಡುವೆ
ತೊಯ್ದಿರುವ ಗರಿಕೆಯಾ-
ಮೇಲಿರುವ ಇಬ್ಬನಿಯು
ಅವಳ ಕಣ್ಣಂತೆ...!

ಬೀಸುಗಾಳಿಗೆ ಕೊಂಚ-
ಕೊಂಚವೇ ಬಳುಕುವಾ
ಹೊಂಬಾಳೆ ಬಿರಿದಂತೆ
ಅವಳ ನಗುವು...!

ಕಲ್ಪವೃಕ್ಷದ ಮೇಲೆ
ಇಬ್ಬನಿಯು ಒಂದಾಗಿ
ಹನಿಯು ಕೆಳಗಿಳಿವಂತೆ
ಅವಳ ಮಾತು...!

ಕೆಂಡಸಂಪಿಗೆ

. . . . . ಸಖ್ಯಮೇಧ