: ಸಖ್ಯಮೇಧ: November 2015

November 23, 2015

‪#‎ಕೆಂಡಸಂಪಿಗೆ‬


.
ಹಾಲುಗಲ್ಲದ ಚೆಲುವೆ ಸಾಲುಹಲ್ಲಿನ ಬಾಲೆ
ಕಾಲು ಎಲ್ಲಿಡಲಲ್ಲಿ ಏಳು ಮಲ್ಲಿಗೆ ಮಾಲೆ;
ಪಾಲು ಪಲ್ಲಟಗೊಂಡು ಜೋಲು ಕುರುಳಿನ ಲೀಲೆ
ನೂಲುನುಣುಪಿನ ಹಣೆಯು ಕೊಲ್ಲೋ ಕಂಗಳ ಮೇಲೆ.!!
.
. . . . . . ಕವನತನಯ ಸಖ್ಯಮೇಧ

‪#‎ಕೆಂಡಸಂಪಿಗೆ‬


.
ಕಂಗಳೊಳಗಿಹ ಕಣ್ಗೊಳದಲೂ
ಕಂಗೊಳಿಸುತಿದೆ ಕೆಂಡಸಂಪಿಗೆ!
ನೇಹಗಂಧವು ಬಂಧಿಸುತ್ತಿರೆ
ಸೋತು ಹೋಗಿದೆ ಗುಂಡಿಗೆ!!
.
ಮನದ ತಾಣದಿ ಪ್ರೇಮ ಭರ್ತನ
ಅವಳ ನೆನಪಿನ ನರ್ತನ..
ಅವಳ ಮಿಂಚಿನ ನೋಟದಿಂಪನ
ಎನ್ನ ಎದೆಯಲಿ ಕಂಪನ!
.
ಸುರುಳಿಗುರುಳಿನ ಹೊರಳುವಾಟಕೆ
ಗುಳಿಯ ಕೆನ್ನೆಯೂ ಆಟಿಕೆ
ಮಧುವಲದ್ದಿದ ಮುದ್ದು ಅಧರಕೆ
ಮಧುರ ಮುತ್ತಿನ ಕಾಣಿಕೆ!
.
. . . . . . . ಕವನತನಯ ಸಖ್ಯಮೇಧ

‪#‎ಪಾಪು‬


ನೊಸಲಿನೆಸಳಿನ ಮೇಲೆ ಪಸುಳೆವಿಸಿಲದು ಹೊಮ್ಮಿ
ಹಸುಳೆಯಿವಳೀ ಹೆರಳು ಹರಳಕಾಂತಿಯ ಚಿಮ್ಮಿ
ಹಸಿತುಷಾರದ ಸಾರ ಸರಸರನೆ ಪಸರಿಸಿದೆ
ಹೆಸರಿರದ ಹೊಸಬೆಳಕು ಕಿರುಗಣ್ಣಲೊಸರಿದೆ
. . . . . . ಕವನತನಯ ಸಖ್ಯಮೇಧ

ಗುರು

ಮೊರೆವ ತೊರೆಯರೆದೂರ ಸಾರಲು- 
ತೊರೆದು ನೊರೆಹೊರೆಯೊಡಲ ಕಡಲು 
ಮರಳಿ ಸೇರಿತು ತನ್ನ ಗೂಡಿಗೆ; 
ನೀ- ತೆರಳುವೆಂದಿಗೆ ಗುರುವಿನಡಿಗೆ?
.
ನೀಲಬಾನಲಿ ತೇಲುಮುಗಿಲದು 
ಸಾಲುಸಾಲಿನ ಮಳೆಯ ಸುರಿಸಿ;
ಜಲವು ಸೇರಿತು ಮತ್ತೆ ಅಲ್ಲಿಗೆ; ನೀ-
ಅಲೆಯುವೆಂದಿಗೆ ಗುರುವ ನೆಲೆಗೆ?
.
ಬಾಗು ಚಂದ್ರನು, ಕೆಂಪು ಸೂರ್ಯನು
ಸಾಗಿ ಬಂದಿಹ ದಾರಿ ಕಾಣದೆ
ಮಗುಚಿ ಹೋದರೂ ರಾಶಿ ನೀರಲಿ; ನೀ-
ಹೋಗದಿರು ಗುರುವಿರದ ಊರಲಿ!
.
ಹಣತೆ ಉರಿಯಲು, ಗುರಿಯು ಗುರುವಿನ
ಅಣತಿ ಪಡೆಯುತ ಮೆರೆದು ಗೆಲ್ಲಲಿ!
ಕಣಕಣವೂ ಗುರುವೆಂಬ ಶಿಲ್ಪಿಯ
ಚಾಣದೇಟಲಿ ಮೀಯಲಿ !!
.
. . . ಕವನತನಯ ಸಖ್ಯಮೇಧ

ಕೆಂಡಸಂಪಿಗೆ

ಶಾಲ್ಮಲೆಯ ತೀರದಲಿ ನಲ್ಮೆಯಿಂದರಳಿಹುದು
ಕೆಂಡಸಂಪಿಗೆ ಹೂವು ಘಮಲು ಬೀರಿ..
ಕಲ್ಮನವನೂ ಕೊರೆದು ಒಲ್ಮೆಯಲೆಯನು ಹರಿಸಿ
ಹರಿವ ನದೀತೀರ ಹೂವು ಅವಳು- ತೀರಾ ಹೂವು ಅವಳು....

ಕೆಂಡಸಂಪಿಗೆ ಬಳಿಗೆ ಆ ಗಾಢ ಗಂಧ!
ಅವಳ ನೆನಪಿನ ಒಳಗೆ ಅದೆಂಥಾ ಬಂಧ!
ಮಿದುಮೊಗ್ಗು ಅರಳಿ ಸಂಪಿಗೆ ಹೂವು ನಗುವಂತೆ
ಅವಳ ತುಟಿ ಅರಳುತಿರೆ ಅದೆಂಥಾ ಚಂದ!!

ವನದ ಸಂಪಿಗೆ ಕಂಪು ಊರಿನೆದೆಯೊಳಗಿಳಿಯೆ
ಅವಳ ನೆನಪಿನ ತಂಪು ಮನದೊಳಗೆ ಉಳಿಯೆ!
ಬಲುಮಧುರ ಹೂವಂದ, ಅವಳ ಅನುಬಂಧ!
ಕೆಂಡಸಂಪಿಗೆಯೊಡನೆ ಒಡನಾಟದಿಂದ!

ಅವಳೆಂದರವಳಲ್ಲ; ಸಂಪಿಗೆಯು ಹೂವಲ್ಲ;
ಅವರೀರ್ವರೂ ಬೇರೆ ಬೇರೆಯೇ ಅಲ್ಲ!;
ಅವಳುಸಿರೆ ಆ ಘಮಲು, ಸಂಪಿಗೆಯೆ ಅವಳು,
ಕೆಂಡಸಂಪಿಗೆಯೆನಲು ನೆನಪಾಗುವವಳು!!

#‎ಕೆಂಡಸಂಪಿಗೆ‬


ಬಲುಮುದ್ದು ಅವಳದ್ದು ಬಿಳಿಯದ್ದು ಕೆನ್ನೆ;
ಗುಳಿಬಿದ್ದು ನಗುತಿದ್ದರದು ಮುದ್ದೆ ಬೆಣ್ಣೆ!
ಬಳಿಯಿದ್ದು ನೋಡಿದ್ದೆ- ತಿಳಿದಿದ್ದೇ ನಿನ್ನೆ-
ನಾಚಿದ್ದ ಅವಳದ್ದು ಚಿನ್ನದ್ದು ಕೆನ್ನೆ! wink emoticon 
.
. . . . . ಕವನತನಯ ಸಖ್ಯಮೇಧ

‪#‎ಕೆಂಡಸಂಪಿಗೆ‬

‪#‎ಕೆಂಡಸಂಪಿಗೆ‬
'ಅವಳ' ಮನೆಕಡೆ ಬಾಗತೊಡಗಿವೆ
ಕೆಂಡಸಂಪಿಗೆ ಮರಗಳು;
ಅವಳ ಉಸಿರನು ತಾವು ಉಸಿರಿಸಿ
ಹೆಚ್ಚು ಕಂಪನು ಪಡೆಯಲು!
.
ನನ್ನ ಊರಿನ ಕೆಂಡಸಂಪಿಗೆ
ಹೆಚ್ಚು ಬಣ್ಣವ ಸೂಸಿದೆ;
'ಅವಳ' ನಾಚಿದ ಕೆನ್ನೆ ಕಾಣಲು
ತನಗೆ ತಾನೇ ಸೋತಿದೆ!
.
ಕೆಳಗೆ ಉದುರಿದ ರಾಶಿ ಸಂಪಿಗೆ
ನೆಲದಿ ಚಿತ್ರವ ಬರೆಯಿತು;
ಅವಳ ಕೈ ಮದರಂಗಿ ಕಾಣಲು
ಗೆಲುವ ಆಸೆಯ ತೊರೆಯಿತು!
.
ಕೆಂಡಸಂಪಿಗೆ- ಅದರ ಕಂಪಿಗೆ
ಬಿರಿದು ನಕ್ಕಿವೆ ಉಳಿದ ಹೂಗಳು
'ಅವಳ' ನಗುವಿನ ನೆನಪಿನಾಟಕೆ
ಎದೆಯಲರಳಿದೆ ಭಾವಕುಸುಮವು!
.
ಹರಿವ ತೊರೆ,ಕಾನನದ ನಡುವಲಿ
ಕೆಂಡಸಂಪಿಗೆ ವೃಕ್ಷವು!
ತುಡಿವ ಎದೆ, ಮನ ನೆನೆವ ನನ್ನಲಿ
'ಅವಳ' ನೆನಪಿಗೆ ರಕ್ಷೆಯು!
.
. . . . . . . ಕವನತನಯ ಸಖ್ಯಮೇಧ

‪#‎ಸುಂದರಿ‬


.
ಸುಮಸಮ ಅನುಪಮೆ, ಒಲುಮೆಯ ಚಿಲುಮೆ;
ಸುಂದರಿ ಶಮೆ, ರಮೆ, ಸೌಂದರ್ಯ ಸೀಮೆ!
ಸು-ಕುಸುಮ ಕೋಮಲೆ, ಚಂಚಲೆ! ಭಲೆ ಭಲೆ!
ನೀ ನಗುವಿನ ಅಲೆ! ಸನಿಹಕೆ ಬರಲೇ?! wink emoticon tongue emoticon
. . . . . ಕವನತನಯ ಸಖ್ಯಮೇಧ

‪#‎ಕೋರಿಕೆ‬


ಸೊಲ್ಲವಲ್ಲಿಗಳೆಲ್ಲೆಯಿಲ್ಲದೆಯೆ ಹೊರಬರಲಿ-
ಬೆಲ್ಲಮೆಲ್ಲುವ ಸಿಹಿಯ ಓದುಗನಿಗೀದು!
ಮೆಲ್ಲನುಲ್ಲಾಸದಲಿ ಬರೆದೆಲ್ಲ ಸಾಲುಗಳು 
ಸಲ್ಲುತಲಿ ಬಲ್ಲವರ ಮನಗೆಲ್ಲುವಂತೆ!
.
. . . . ಕವನತನಯ ಸಖ್ಯಮೇಧ