: ಸಖ್ಯಮೇಧ: March 2015

March 13, 2015

ಇಚ್ಛೆ

ಹುಚ್ಚು ಪ್ರೀತಿಯ ಇಚ್ಛೆ ಹೆಚ್ಚಳ
ಮುಚ್ಚುಮರೆಯಲಿ ಆಸೆ ನಿಚ್ಚಳ....
ಒಲವ ಸೀಸೆಗೆ ನಗೆಯ ಮುಚ್ಚಳ
ಬಿಚ್ಚಿ ತೆರೆದರೆ ಪ್ರೀತಿ ಸಪ್ಪಳ..

ಸ್ವಚ್ಛ ಒಲವಿನ ಭಾವ ಹೆಚ್ಚಿದೆ
ಹೊಚ್ಚ ಹೊಸ ಅನುಭೂತಿ ಮೆಚ್ಚಿದೆ...
ಎದೆಯ ಕಿಚ್ಚಿಗೆ ತಂಪು ಹಚ್ಚುವ
ನಗೆಯ ಗುಚ್ಛವ ನೆಚ್ಚಿದೆ...

ತುಚ್ಛ ಕೃತಿಗಳು ಬೆಚ್ಚಿಬಿದ್ದಿವೆ
ಹಚ್ಚ ಹಸಿರಿನ ಪ್ರೀತಿ ಕಂಡು....
ಕೆಚ್ಚಿನಲಿ ಚುಚ್ಚುವಾ ಬಯಕೆಯು
ಇಚ್ಛೆಯಿಲ್ಲದ ಮಿಥ್ಯೆಗಳನು...

ಹಳೆಯ ಯೋಚನೆ ನುಚ್ಚುನೂರು
ಹಳೆಯ ಕಿಚ್ಚಿಗೆ ಬಿತ್ತು ನೀರು...
ಅಚ್ಚ ಪ್ರೀತಿಗೆ ವೆಚ್ಚ ಇಲ್ಲ
ಬಿಚ್ಚು ಮನಸಿನ ನುಡಿಯೇ ಎಲ್ಲ...

# ಕೆಂಡಸಂಪಿಗೆ
. . . . ಸಖ್ಯಮೇಧ
(ಕೃತಿ= ಕಾರ್ಯ ಎಂಬರ್ಥದಲ್ಲಿ ಬಳಸಲಾಗಿದೆ.
ಹಾಗೂ ಸಂಬಂಧಗಳು ಎಂಬರ್ಥದಲ್ಲಿ
ಕೊಂಡಿ ಪದ ಬಳಸಿದೆ.)

ಸಂಗ

ಚಂದ ನಿನ್ನಯ ಸಂಗ
ತಂದ ಸುಖದುತ್ತುಂಗ ;
ಸಾಂಗತ್ಯ ದೊರೆತರೆ ಬೇಗ
ಪ್ರೀತಿ ಸಂಗತಿ ಸಾಂಗ...
ಸಂಗಾತಿ ನೀ ಕರೆದಾಗ
ಸನಿಹಕ್ಕೆ ಬಾ ಎಂದಾಗ
ಪ್ರೇಮಸೌಧದ ಶೃಂಗ
ತಲುಪಿ ನಕ್ಕೆನು ಆಗ...
ಕಂಗಳಲಿ ನೀರಿಳಿದಾಗ
ನೀ ತುಂಬ ದೂರಾದಾಗ
ಎದೆನಡುಗಿ ಮನಸಿಗೆ ರೋಗ
ಒಲವ ಭಾವದ ಭಂಗ...
ಮಾಯಕದ #ಕೆಂಡಸಂಪಿಗೆ
. . . . . .ಸಖ್ಯಮೇಧ

ಜೊತೆ

ಕೆಂಪು ರಂಗೇರಿದೆ ಗಗನ
ತಂಪು ತಂಗಾಳಿಯ ಗಾನ
ಮಂಪರಿನ ಸವಿಸಂಜೆ ಯಾನ...
ಕಂಪೆರೆವ ಹಳೆನೆನಪ ಮನನ...
.
ಆಸರೆಗೆ ತರುಲತೆಗೆ ಮರವು ಇರಬೇಕು..
ಕುಸುಮಕ್ಕೆ ಭ್ರಮರದಾ ಸ್ಪರ್ಶವಿರಬೇಕು...
ನೇಸರನು ತೊಲಗಿದರೆ ಚಂದಿರನು ಬರಬೇಕು..
ಬೇಸರವು ಬಂದಾಗ ನಿನ್ನ ಜೊತೆ ಬೇಕು...
ಮಾಯಕದ # ಕೆಂಡಸಂಪಿಗೆ
. . . . . . ಸಖ್ಯಮೇಧ