: ಸಖ್ಯಮೇಧ: September 2015

September 21, 2015

‎ಕೆಂಡಸಂಪಿಗೆ‬

ಅರಳುಹೂವಿದೆ ಹೆರಳತಾವಲಿ
ಹರಳಸಾಲಿದೆ ಬೆರಳಮೂಲದಿ
ಇರುಳಗಪ್ಪಿದೆ ಕುರುಳಸುರುಳಿಗೆ
ಕೆರಳಿಸುತ್ತಿದೆ ವಿರಳ ಕಂದೀವಿಗೆ...
.
‪#‎ಕೆಂಡಸಂಪಿಗೆ‬
. . . . . . . . ಕವನತನಯ ಸಖ್ಯಮೇಧ

ಕೆಂಡಸಂಪಿಗೆ‬

ಕೆಂಬಾನು ಮುಸಿನಗಲು ಮುಸ್ಸಂಜೆ ಮುಸುಕಿಹುದು-
ಮುಸಲ ಧಾರೆಯ ಬದಲು ಬಿಸಿಲ ಧಾರೆಯ ಸುರಿಸಿ!;
ಮಸುಕಾಗಿಹುದು ಮನಸು- ಮಾಸಿದಾಗಸದಂತೇ;
ಹುಸಿಮುನಿಸು ತೋರುವವಳೊಡನೆ ಇರದೇನೇ frown emoticon 
.
ಈ ಒಂಟಿ ಸಂಜೆಯೆಂಬುದು ಕುಂಟಿ- ಸಾಗುವುದೇ ಇಲ್ಲ...
.
‪#‎ಕೆಂಡಸಂಪಿಗೆ‬
. . . . . ಕವನತನಯ ಸಖ್ಯಮೇಧ

ಕೆಂಡಸಂಪಿಗೆ‬

ಕೆಂಡಸಂಪಿಗೆ ಘಮಲು -ಉಂಡ ತಂಪಿಗೆ ಅಮಲು
ತುಂಡು ಚಂದ್ರಗೂ ಮರುಳು - ಕಂಡು ಓಡಿದ ಹಗಲು
ದುಂಡುಕಂಗಳ ಹುಡುಗಿ ಮಂಡಿಯೂರಿದಳಿಲ್ಲಿ
ಬಂಡೆಯಂತಹ ಮನವ ಬೆಂಡಾಗಿಸಿದಳಿಲ್ಲಿ..
.
‪#‎ಕೆಂಡಸಂಪಿಗೆ‬

ಕೆಂಡಸಂಪಿಗೆ

ಬಸಿವ ಮಧು ತುಟಿಯಲ್ಲಿ, ಬಿಸಿಯುಸಿರು ಬಳಿಯಲ್ಲಿ
ಬಸವಳಿದ ಮುಂಗುರುಳು ಬೀಸುತಿಹ ಗಾಳಿಯಲಿ
ಬೆಸುಗೆ ಜಡೆಯೆಳೆಗಳಲಿ ಬಿಸುಪಿಹುದು ನಡೆಯಲ್ಲಿ-
ಬೇಸರವು ಕಳೆದಂತೆ ಭಾಸ ಅವಳೆಡೆಯಲ್ಲಿ
.
ಕುರುಳ ಶೇಷವು ಮುಂದೆ, ಉಳಿದ ಕೇಶವು ಹಿಂದೆ
ನಗೆಯ ಪಾಶದ ಜೊತೆಗೆ ಮೆರೆವ ವೇಷದ ಬೆಸುಗೆ
ಸುಮದ ಕೋಶವು ಆಕೆ; ಬಹಳ ಕುಶಲದ ನಾರಿ
ಪ್ರೇಮ ರಾಶಿಯು ಆಕೆ, ಒಲವ ಕಾಶಿಗೆ ನೌಕೆ
.
#ಕೆಂಡಸಂಪಿಗೆ
. . . . . . ಕವನತನಯ ಸಖ್ಯಮೇಧ

bhaarati..

ಮೂರ್ತರೂಪಳು ಆರ್ತರೆದೆಯಲಿ
ಕೀರ್ತಿರೂಪಳು ಪೂರ್ತಿ ಜಗದಲಿ
ಪ್ರಾರ್ಥಿಸಿದವಗೆ ಭರ್ತಿಫಲವನು
ಸ್ವಾರ್ಥವಿಲ್ಲದೆ ನೀಡುವವಳು

ಚುಂಬನ

ತುಂಬಿರುಳು ಚುಂಬನದ ಹಂಬಲವು ತುಂಬಿರಲು
ಬೆಂಬಿಡದ ತುಟಿಬಂಧ ಹೊಂಬೆಳಗವರೆಗೂ
ಕುಂಭದುಂಬುವ ಜೇನು ಚೆಂದುಟಿಗಳಲ್ಲಿ
ಇಂಬು ಸಿಕ್ಕಿದೆ ಸುಖಕೆ ಎಳೆಬಾಹುಗಳಲಿ
.
ಕನಕನಖ ಕೆಣಕುತಿದೆ ಗೀಚುತಲಿ ಬೆನ್ನ
ಕಣಕಣವೂ ಕೆನೆಯೀಗ; ಸಿಹಿದೇಹ ಚೆನ್ನ!
ಮಿಲನದಮಲಿದೆ ಈಗ ಮನದಮೂಲದ ತನಕ
ತುಮುಲ ಕಳೆದಿದೆ ಬೇಗ ಕಳೆದುಹೋಗುವ ತವಕ
.
‪#‎ಕೆಂಡಸಂಪಿಗೆ‬
. . . . . . . . ಕವನತನಯ ಸಖ್ಯಮೇಧ (ಕಾಲ್ಪನಿಕ)