: ಸಖ್ಯಮೇಧ: July 2015

July 22, 2015

ಕೆಂಡಸಂಪಿಗೆ

ಮರಿಗರುವಿನಂಥವಳು ಮರುಬಿರಿದ ತುಟಿಯವಳು
ಮಿರುಮಿರುಗೊ ಮುಖದವಳು ಮಾರಳತೆ ಜಡೆಯವಳು
ಮೋರೆ ತೋರುತ ನಕ್ಕು ಮರೆಗೆ ಸರಿದಳು ಯುವತಿ
ಮೊರೆಕರೆದರಾಲಿಸದ ಮರೆಯಲಾಗದ ಗೆಳತಿ
.
‪#‎ಕೆಂಡಸಂಪಿಗೆ‬
. . . . . . . . . . . . ಸಖ್ಯಮೇಧ

ಮಲೆನಾಡು

ಸುರಗಿ ಸಂಪಿಗೆ ಮಲ್ಲಿ, ನೂರು ಹೂಗಳ ಬಳ್ಳಿ
ಪಾರಿಜಾತವು ಚೆಲ್ಲಿ ವನಕೆವನವೇ ಬೆಳ್ಳಿ!
ಮಲೆನಾಡ ಕಡುಗಾಡಲ್ಲಿ ಇಬ್ಬನಿಯ ರಂಗವಲ್ಲಿ
ಗಿಳಿ ಗುಬ್ಬಿ ಜೊತೆ ಮಿಂಚುಳ್ಳಿ, ಹಕ್ಕಿಗಳ ರಾಗವಲ್ಲಿ
.
‪#‎ಮಲೆನಾಡು_ಮೆಳೆಕಾಡು‬
. . . . . . ಸಖ್ಯಮೇಧ

ಚೆಲುವೆ...

ಬಟ್ಟಲಿನ ಕಣ್ಣುಗಳು ,ಬೆಟ್ಟದಾ ಪರಿ ಚೆಲುವು
ಪುಟ್ಟ ಸಿಂಧೂರ ತಲೆ-ಮಟ್ಟಕ್ಕೆ ಸೆರಗು
ಪಟ್ಟದಾ ರಾಣಿಯಂತಿಟ್ಟಿರುವ ಮೂಗುತಿಯು
ಗುಟ್ಟಾದ ಮುಖಕಮಲ ರಟ್ಟಾದ ವೇಳೆಯಲಿ,,,


ಮೋಹಕ ಚೆಲುವೆಯಾಕೆ,ಮಾಯಕದ ಶಿಲಾಬಾಲಿಕೆ
ನಾನೊಬ್ಬ ಅನುರಾಗಿ, ಈಗಾದೆ ಬೈರಾಗಿ
ತುಸುಸರಿಯಿತು ಸೆರಗು, ನಸುನಕ್ಕಳು ಆಕೆ..
ಮನೆಗೆ ಬರದವಳು, ಮನದಲ್ಲೇ ಉಳಿದಳು..

ಕೆಂಡಸಂಪಿಗೆ

ಸುರಹೊನ್ನೆ ಮರವನ್ನೆ ಕೇಳಿದೆನು ನಾ ನಿನ್ನೆ-
ಕೆಂಡಸಂಪಿಗೆಯಂತೆ ಹೆಚ್ಚು ತಂಪು!
ಗಂಧದಾ ಮರ ಕೂಡ ಅಂದಿತ್ತು ಚಂದದಲಿ-
"ಕೆಂಡಸಂಪಿಗೆಗೇನೆ ಹೆಚ್ಚು ಕಂಪು"!!
‪#‎ಕೆಂಡಸಂಪಿಗೆ‬
. . . . . . . . ಸಖ್ಯಮೇಧ

ಕೂಸಿನ ಕುರಿತು

ಜಗದಗಲ ಮೆರೆವಂತ ಮುಖಕಮಲ ನಿನ್ನದು
ಅತಿಮೃದುಲ ಕಣ್ಣುಗಳು, ಕಿಲಕಿಲನೆ ನಗುವವಳು
ಹೊಂಗೂದಲದು ಚೆನ್ನ, ನಗೆಗೆ ಸಾವಿರ ಬಣ್ಣ
ಎತ್ತಿಕೊಳುವಾಸೆ, ಮುಗ್ಧ ಅಂದದ ಕೂಸೇ..

July 13, 2015

ಮಲೆನಾಡು

ವಿಪುಲ ಹೂಫಲವೀವ ಸುಫಲ ಸಹ್ಯಾದ್ರಿ
ಹಂಪಲಿನ ತಂಪೆರೆವ ಸಂಪನ್ನೆ, ಧಾತ್ರಿ!
ಸರ-ಸರೋವರ ಸಾರ ಸಾಕಾರೆ, ಮೈತ್ರಿ!
ಸುಮ ಘಮದಮಲಲಮಿತ ಮೆರೆವ ಧರಿತ್ರೀ !
.
‪#‎ಮಲೆನಾಡು_ಮೆಳೆಕಾಡು‬
. . . . . . . ಸಖ್ಯಮೇಧ

ಕೆಂಡಸಂಪಿಗೆ

ಹೆಜ್ಜೇನ ಮೈಬಣ್ಣ ಮಜ್ಜನದ ಮೈಕಾಂತಿ
ಲಜ್ಜೆ ತುಂಬಿದ ನೋಟ ಹೆಜ್ಜೆ ನವಿಲಿನ ಆಟ
ಸಜ್ಜುಗೊಂಡಿಹ ಮೊಗವು ಹೆಜ್ಜಾಲ ಮುಂಗುರುಳು
ಕಜ್ಜಾಯದಂಥ ತುಟಿ ಸಜ್ಜೆಮನೆ ಹುಡುಗಿಗೆ...
....ಕೆಂಡಸಂಪಿಗೆ
feeling naughty.

July 08, 2015

ಅವಳು

ಬೆಳಕು ಹೀರಿದ ಹುಡುಗಿ, ಬಡಗಿ ಕೆತ್ತಿದ ಬೆಡಗಿ
ತುಳುಕಿ ಚೆಲ್ಲುವ ಹೆರಳು, ಬಳುಕಿ ನುಲಿಯುವ ಬೆರಳು
ತಳುಕು ಹಾಕುವ ಪಾದ, ಘಿಲಕು ಗೆಜ್ಜೆಯ ನಾದ
ಪುಳಕ ಬೀರುವ ದೃಷ್ಟಿ, ಚಳಕ ನಿನ್ನಯ ಸೃಷ್ಟಿ
.
ಕೆಂಡಸಂಪಿಗೆ
. . . . . . . . ಸಖ್ಯಮೇಧ

ಬೆರಗು

ಹಿಗ್ಗು ತುಂಬಿದ ಕಣ್ಣ ಹುಬ್ಬು-
ಸುಗ್ಗಿ ಸಂಭ್ರಮ ಕೂಡ ಮಬ್ಬು!
ಲಗ್ಗೆಯಿಡು ಬಾ, ತೊರೆದು ಕೊಬ್ಬು
ಮಗ್ಗುಲಲಿ ಮಲಗುವೆನು, ತಬ್ಬು
.
ಕೆಂಡಸಂಪಿಗೆ
. . . . . . . . . . . ಸಖ್ಯಮೇಧ

ನೀನು...

ನೀನೊಂದು ಸಾಹಿತ್ಯ, ನನ್ನೆದೆಯ
ಲಾಲಿತ್ಯ
ಅತಿಮಧುರ ಸಾಂಗತ್ಯ, ಈ ಪ್ರೀತಿ ಸಿಹಿಸತ್ಯ
ಬೆರಳುಗಳ ದಾಂಪತ್ಯ, ನಡೆಸೋಣ ಪ್ರತಿನಿತ್ಯ
ನೀ ಬದುಕಿನಾಗತ್ಯ, ಈ ಬಂಧವೇ ಅಂತ್ಯ
.
ನಿನ್ನ ಕಂಗಳ ನೃತ್ಯ, ನನ್ನ ಕಣ್ಣಿಗೆ ಭತ್ಯ
ತುಂಟ ಕೂದಲ ಕೃತ್ಯ, ನನ್ನೆದೆಗೆ ಆತಿಥ್ಯ
ಕೇಶನಿಯಮದ ರೀತ್ಯ, ಆ ಜಡೆಯ ಸಾರಥ್ಯ
ನೀನಿರದ ಮನ ಮಿಥ್ಯ, ನೀ ಸಿಗಲು
ಕೃತಕೃತ್ಯ
.
ಕೆಂಡಸಂಪಿಗೆ

. . . . . . . . . ಸಖ್ಯಮೇಧ

ಕನ್ನ

ಕನ್ನಹಾಕುವ ಕಣ್ಣಸನ್ನೆಯು
ಖಿನ್ನಗೊಳಿಸುವ ಕೆನ್ನೆಬಣ್ಣವು
ಬೆನ್ನಮೇಲ್ಗಡೆ ಚಿನ್ನದಾ ಜಡೆ
ಹೊನ್ನತೇಜದ ನಗುವ ಮುನ್ನಡೆ...
.
ಮೆಲ್ಲನಾಚಿದೆ ಬೆಳ್ಳಗಲ್ಲವು
ಎಲ್ಲನೋಟದ ಕಳ್ಳಬಿಂದುವು
ಎಲ್ಲೆ ಮೀರದ ಚೆಲ್ಲುಮಾತಿಗೆ
ಕಲ್ಲು ಹೃದಯವೂ ಹಲ್ಲೆಗೊಂಡಿದೆ...

ಕೆಂಡಸಂಪಿಗೆ
. . . . . . . . . . ಸಖ್ಯಮೇಧ

ಅವಳೆಂದರೆ...

ಅರೆ...!
.
ಸೂರ್ಯ ಪಶ್ಚಿಮಕ್ಕಿದ್ದಾನೆ,
ಸೂರ್ಯಕಾಂತಿಯ ಮುಖ ಪೂರ್ವಕ್ಕೆ...!!
.
ಓ...!! ಪೂರ್ವಕ್ಕೆ ನನ್ನವಳು ನಿಂತಿದ್ದಾಳೆ..!

ಕೆಂಡಸಂಪಿಗೆ

ಕೆಂಡಸಂಪಿ...

ಕೆನ್ನೆ ಕಿತ್ತಳೆ, ಕತ್ತು ಬೆತ್ತಲೆ
ಮುಖವು ನೈದಿಲೆ, ಒಮ್ಮೆ ಮುಟ್ಟಲೆ?
'ನತ್ತು' ನಕ್ಕರೆ ಹೊಳೆವಳವಳೇ
ಅಧರ ಅದುರಿರೆ ಮುತ್ತಿನಾಹೊಳೆ..
.
ಹತ್ತುಸುತ್ತಿನ ಒತ್ತು ಜಡೆಯು
ಗತ್ತು ತುಂಬಿಹ ಸುತ್ತು ನಡೆಯು
ಒತ್ತಿ ತೀಡಿದ ಅಚ್ಚ ಕಾಡಿಗೆ
ಅತ್ತರಿನ ಘಮ ಮತ್ತೂ ಸನಿಹಕೆ...
.
ಕೆಂಡಸಂಪಿಗೆ

ಹೂಮೊಗ

ಏಯ್ ಚಿಟ್ಟೆ...!!

ನಿಲ್ಲು...!!

ಅದು ಹೂವಲ್ಲ, ನನ್ನವಳ ಮೊಗ...!!

ಕೆಂಡಸಂಪಿಗೆ

ಹಂಬಲ

ಗೊಂದಲದ ಹುಡುಗಿಯೇ,
ಹಂಬಲದ ಹುಡುಗ ನಾ,..
ಚಂಚಲವ ಬದಿಗಿಟ್ಟು
ಸಂಚಲನವಾಗು ಬಾ...
___________
ನಿನ್ನ ನೆನಪಾಗಿ ಒಲೆ ಮೇಲಿರುವ ಅನ್ನದ ಪಾತ್ರೆ ಮೇಲಿನ
ಬಟ್ಟಲಿನಂತಾಡುತ್ತದೆ ಮನಸ್ಸು... ನಿನ್ನ ನೆನಪು
ತೀವ್ರವಾಗಿ ಅದರಲ್ಲೇ ಮುಳುಗಿದಾಗಲೇ ಅದು ಮತ್ತೆ
ಸ್ಥಿಮಿತಕ್ಕೆ ಬರೋದು..
ಕೊನೇ ಬಾರಿ ಸಿಕ್ಕಾಗ ಏನನ್ನು ಬಿಟ್ಟು ಹೋದೆಯೋ
ಗೊತ್ತಿಲ್ಲ.. ಸಂಪಿಗೆಯ ಘಮ ಮೂಗಿಗೆ
ಬಡಿದಾಗಲೆಲ್ಲ ನಿನ್ನದೇ ನೆನಪು..
ನಿಜ ಹೇಳ್ತೀನಿ, ಆ ನಿನ್ನ ಮುಖವನ್ನು ಸರಿಯಾಗಿ
ನೋಡಬೇಕೆಂದು ಎಷ್ಟೋ ಬಾರಿ
ಅಂದುಕೊಂಡಿದ್ದೇನೆ..
ನೀ ಸಿಕ್ಕಾಗಲೆಲ್ಲ ಮನಸ್ಸು ಗೊಂದಲದ
ಗೂಡಾಗಿ ಏನಾಗುವುದೋ ನನಗೇ ತಿಳಿಯುವುದಿಲ್ಲ..
ಆ ಮುಖವನ್ನು ಸರಿಯಾಗಿ ನೋಡಿಬಿಟ್ಟರೆ ಎಲ್ಲಿ ನನ್ನ
ಎದೆಬಡಿತ ನಿನಗೂ ಕೇಳಿಬಿಡುವಷ್ತು ಹೆಚ್ಚುವುದೋ ಎಂಬ
ಆತಂಕ... ಕನಸಿನಲ್ಲೂ ನಿನ್ನ ಮುಖದ ನಬದಲು
ಮುಂಗುರುಳು ಕಾಣುವುದೇ ಹೆಚು..
�
ಕೆಂಡಸಂಪಿಗೆ

ಪರಿಸರ

ಅವಸಾನದ ವಸನ ಹೊತ್ತು
ಪ್ರಹಸನದ ವ್ಯಸನಕಂಜಿ
ಮಸಣದೆಡೆಗೆ ವದನವಿಟ್ಟು
ನಸುನಲುಗಿದೆ ಪರಿಸರ...

ಹಸನಾಗುವ ಕನಸ ತೊರೆದು
ಮುಸಿನಗುತಿಹ ಮನಸ ಶಪಿಸಿ
ಹಸೆಯೇರುವ ವಧುವಿನಂತೇ
ಚಿತೆಯೇರಿದೆ ಪರಿಸರ...

— feeling ಪರಿಸರ ಉಳಿಸಿ...

ಬಳ್ಳಿ

ಕೆಂಡಸಂಪಿಗೆ

ನ ಗುವ ಹವಳವು ಅವಳ ಕಂಗಳು
ನಾ ದ ಸೂಸುವ ಬಳೆಯ ಕೈಗಳು
ನಿ ಯತ ಹಾರುವ ಮುದ್ದು ಮುಂಗುರುಳು
ನೀ ಳ ಮೂಗಿನ ಕೆಳಗೆ ಮುಗುಳು
ನು ರಿತ ಕಂಗಳ ಒಳಗೂ ನಾಚಿಕೆ
ನೂ ರು ಬಿಮ್ಬದ ಮರಿ ಮರೀಚಿಕೆ
ನೆ ಪವೇ ಇಲ್ಲದೆ ನಾಚುವಾ ಮೊಗ
ನೇ ಮ ತಪ್ಪದ ಕೂದಲೇ ಸೊಗ
ನೈ ದಿಲೆಯು ಸಹ ನಾಚಿತೀಗ
ನೊ ಸಲ ಮೆಗಡೆ ಮುಡಿದ ಹೂವು
ನೋ ಡಿ ಖುಷಿಯಲಿ ಕುಣಿದ ಮನವು
ನೌ ಕೆಗೊಬ್ಬನೇ ಇರುವ ನಾವಿಕ
ನಂ ಟಿಲ್ಲವೆನಗೆ ನಿನ್ನ ಬಳಿಕ , ನಿನ್ನ ವಿ-
ನಃ ಎಲ್ಲ ನರಕ....

. . . . ಸಖ್ಯಮೇಧ