ಮನದ ಬಾನಲ್ಲಿ ನೀ ನಲಿವ ನಕ್ಷತ್ರ...
ಕನಸ ಗೋಡೆಯ ತುಂಬ ನಿನ್ನದೇ ಸುಚಿತ್ರ...
ಅನುನಯದಿ ಒಲವಾದೆ ನೀ ಕೆಂಡಸಂಪಿಗೆ ...
ಎದೆಯ ಬೀದಿಯ ತುಂಬ
ನಿನ್ನದೇ ಮೆರವಣಿಗೆ ...
.
ನಿನ್ನ ಮನನದಿ ನನ್ನತನವಿನ್ನು ಗೌಣ...
ನಿನ್ನ ನಗುವಲಿ ನನ್ನ ತ್ರಾಣವೂ ಲೀನ...
ನಿನ್ನ ನೆನಪಲಿ ಮನವು ಅನುದಿನವೂ ತಲ್ಲೀನ...
ನಿನ್ನ ಮಿಲನದಿ ನನ್ನ ಜನ್ಮವೂ ಧನ್ಯ...
. . . . . ಸಖ್ಯಮೇಧ
January 30, 2015
ಮೆರವಣಿಗೆ
ಕಳವಳ
ಒಳಗೊಳಗೇ ಕಳವಳವು
ತಿಳಿಗೊಳದಿ ಅಲೆಯಲೆಯು
ಎಳೆಬಿಸಿಲ ಝಳಕಕ್ಕೆ
ಸುಡುಬಿಸಿಲ ಬಳುವಳಿಯು
ತಿಳುವಳಿಕೆ ಮನಕಿಲ್ಲ
ತಳಮಳಕೆ ಕೊನೆಯಿಲ್ಲ
ಕೊಳೆಕೊಳೆತು ನಾರುತಿವೆ
ಅಳಿದುಳಿದ ನೆನಪುಗಳೂ
ಕಳೆಕೊಳೆಗಳೆದೆಯಲ್ಲಿ
ಬೆಳೆಬೆಳೆದು ನಿಂತಿವೆ...
ಭಾವಕ್ಕಿಲ್ಲ_ಬೆಲೆ
. . . . . ಸಖ್ಯಮೇಧ
January 26, 2015
ಕದ್ದು ಮಾತಾಡು
ನೀ ಕದ್ದು ಮಾತಾಡು, ಮುದ್ದಾದ ಪದ
ಹೇಳು
ಮನ ಎದ್ದು ಕುಣಿವಂತೆ ಉದ್ದುದ್ದ ಕತೆ ಹೇಳು,
ಆಗಾಗ ಪೆದ್ದಾಗಿ ಬಿದ್ದ ಕನಸನು ಹೇಳು,
ಖುದ್ದಾಗಿ ಬಂದುಬಿಡು, ಬಿದ್ದಿರುವೆ
ಪ್ರೀತಿಯಲಿ....
ಕೆಂಡಸಂಪಿಗೆ
. . . . . . . . ಸಖ್ಯಮೇಧ
ಕದಪು ಕೆಂಡಸಂಪಿಗೆ
ಅವಳ ಕದಪುಗಳಲ್ಲಿ ಹೊಸ ಕೆಂಡಸಂಪಿಗೆ...
ಅವಳು ನಾಚುತ್ತಲಿರೆ ಅವು ಕೆಂಪಕೆಂಪಗೆ....
ಸೋತು ಹೋಗುವ ಭಯವು ನನ್ನವಳ
ಕಂಪಿಗೆ...
ಮೈಮರೆತು ಬಿಡುವಾಸೆ ಅವಳುಸಿರ ಇಂಪಿಗೆ....
. . . . . . . . . ಸಖ್ಯಮೇಧ
January 22, 2015
ಬದಲಾವಣೆ
ಹೊಸತನ....!!
ಹಂಬಲವೂ ಕಂಬನಿಯೂ ದೂರಾಯ್ತು; ಸಂತಸದ-
ಹಂದರವು, ಸುಂದರವು ಮನವು ಈಗ...!
ಬದಲಾದೆ, ಮೊದಲಾದೆ, ಕೆಂಡಸಂಪಿಗೆ ಕೇಳೆ-
ಹೊಸಕಂಪು ಬಾಳಲ್ಲಿ ಸೂಸುತಿಹುದು..!!
.
ಚಂದವಿದೆ ಹೊಸ ಬಾಳು, ಪರಿಶುಭ್ರ ಬಾನಂತೆ
ಹೊಸಚುಕ್ಕಿ ಎರಡೆರಡು ಹೊಳೆಯುತಿಹುದು...
ಸ್ವಚ್ಛಂದ ಮನಸು, ಸ್ವಚ್ಛಂದ ದಾರಿ
ಬದುಕೀಗ ನಿರಾಳ
ನನ್ನೊಲವಿನೊಡನೆ...!
.
. . . . . . . . ಸಖ್ಯಮೇಧ
ಅವಸರ
ಅವಸರಿಸಿ, ಕಾತರಿಸಿ ಕಾದಿರುವೆ ಸಮರಸಕೆ
ಸರಸರನೆ ವಿರಹವನು ದೂರ ಮಾಡು...
ಮುನ್ನುಡಿಯೇ ಇಲ್ಲದೆಯೇ ಹುಟ್ಟಿಹುದು ಪ್ರೀತಿ...
ನಿನ್ನ ಸನಿಹವು ನನಗೆ ಆಪ್ಯಾಯಮಾನ...
ಕೆಂಡಸಂಪಿಗೆ ....
. . . . . . . ಸಖ್ಯಮೇಧ
ಒಲವು
ನಿನ್ನೊಲವಿನ ತೆವಲು ಕವಲೊಡೆದಿದೆ
ತನುವಲಿ....
ಸಲಹಿರುವೆ ಹಲವಾರು ಮಹಲುಗಳ ಮನದಲಿ...
ಉಯಿಲಾಗಿದೆ ನನ್ನ ತನ ನಿನ್ನಯ ಹೆಸರಲಿ...
ಗೆಲುವಾಗು ಬಲವಾಗು , ಜೊತೆ ಬಂದು ಬಾಳಲಿ....
ಕೆಂಡಸಂಪಿಗೆ...
January 14, 2015
ಸಂಕ್ರಾಂತಿ
ನೋಡು ಗೆಳತೀ ...
ಸಂಕ್ರಮಣ ಬಂತೆಂದು
ಸೂರ್ಯನೂ ಗತಿ ಬದಲಿಸಿದ್ದಾನೆ...
.
ಹತ್ತು ಸಂಕ್ರಮಣ ಕಳೆದರೂ
ಎಗ್ಗಿಲ್ಲದೆ, ಬಾಗದೇ
ನಡೆದಿದೆ ಒಲವು...
.
ಈ ಪ್ರೀತಿ ನಿರಂತರ
ಕೆಂಡಸಂಪಿಗೆ....
January 10, 2015
January 08, 2015
ಆಕೆ
ಬಿಂಕದಲಿ ನಿಂತಿತ್ತು ಆ ಕೆಂಡಸಂಪಿಗೆ
ಅದ ಕಂಡು ಮನದಲ್ಲಿ ನೆನಪುಗಳ ಮೆರವಣಿಗೆ...
ಹೂವಲ್ಲೂ, ಘಮದಲ್ಲೂ ಅವಳದ್ದೇ ನೆನಪು...
ಹೂವಲ್ಲೂ ಅವಳ ಮೊಗ ಅರಳುವುದೇ ಒನಪು...
.
ಗೆಳತೀ...
ಕತ್ತಲೆಯು ಏರುತಿರೆ
ನಿನ್ನ ನಗೆಯಾ ಹೂವು
ಅರಳುತಿರೆ- ನನಗಾಗ
ಮತ್ತೆ ಮುಂಜಾವು...!
. . . . . . ಸಖ್ಯಮೇಧ
ಹೂರಾಣಿ
ಹೂಗಳ ಸಂತೆಯಲ್ಲಿ ...
ಮಲ್ಲಿಗೆಯ ಪರಿಮಳಕೆ ಎಲ್ಲರಿಗೂ ಉನ್ಮಾದ...
ಕೇದಿಗೆಯು ಬಂದಾಗ ಜೊತೆಗೆ ಉದ್ವೇಗ..!
ಜಾಜಿಯದೂ ಸೋಜಿಗ..! ಸರಿಸಾಟಿ ಯಾರೀಗ..?! -
ಕೆಂಡಸಂಪಿಗೆ ಬಂದಾಗ - ಬದಿಗೆ
ಸರಿದವು ಬೇಗ...!
.
ತನ್ನ ಕಂಪಿನ ಗಾಢತೆಗೆ
ಅಮಲೇರಿದಂತಾಗಿ
ಇನ್ನಷ್ಟು ಕೆಂಪೇರಿ-
-ದಳು ಕೆಂಡಸಂಪೀ....
. . . . . . . ಸಖ್ಯಮೇಧ
ಬೆಳದಿಂಗ್ಳು..
ಆಕಾಶವೆಂಬ ಹೇಮಪಾತ್ರೆಗೆ
ಚಂದಿರನೆಂಬ ತೂತು....
.
ಚೆಲ್ಲಿ ಹರಿಯುತ್ತಿದೆ ಬೆಳ್ದಿಂಗಳು....!
. . . . ಸಖ್ಯಮೇಧ
ಹುಡುಗಿ
ಮುದ್ದುಗಲ್ಲದ ಹುಡುಗಿ..! ಇನ್ನೊಮ್ಮೆ ನಾಚು....
ನೋಟದಲಿ ನಾಚಿಕೆಯ ಕೊಂಚ ಮರೆಮಾಚು...
ಮುಗುಳುನಗೆಯಾ ಸೂಸು, ಕೆಂಪೇರಲಿ ಕೆನ್ನೆ...
ನಿನ್ನ ನೋಡುತ ಮರೆವೆ ಪೂರ್ತಿ ಜಗವನ್ನೆ...!
.
ಹೊನ್ನಬಣ್ಣದಿ ಮಿಂದೆದ್ದು
ಬಂದವಳು ಇವಳು...
ಕೆಂಡಸಂಪಿಗೆ ತರದಿ
ನಳನಳಿಸುತಿಹಳು...
.
ಕೆಂಡಸಂಪಿಗೆಯಂಥವಳು ...!
. . . . . . ಸಖ್ಯಮೇಧ
ಕೆನ್ನೆ
ಗೆಳತೀ....,
ಮಾತುಮಾತಿಗೆ ನೀನು ನಾಚಿ ನೀರಾಗುತಿರೆ
ಬಣ್ಣದೋಕುಳಿ ನಿನ್ನ ಕೆನ್ನೆ ತುಂಬಾ !
ನೀ ನಕ್ಕು ಕೆನ್ನೆ ಕೆಂಪೇರುತಿರೆ- ಅರಳುವುದು-
ಕೆಂಡಸಂಪಿಗೆ ಹೂವು ಕೆನ್ನೆ ಮೇಲೆ..!!
.
ನಕ್ಕು ಬಿಡು, ನಾಚಿ ಬಿಡು-
ಕೆಂಪೇರಲಿ ಗಲ್ಲ;
ಕದ್ದುಬಿಡು, ದೋಚಿಬಿಡು-
ಭುವಿಯ ಬಣ್ಣವನೆಲ್ಲ...!!
.
# ಅಪ್ಪಟ_ಕೆಂಡಸಂಪಿಗೆಯಂಥವಳು ...!!
. . . . . . ಸಖ್ಯಮೇಧ
ಹೊರ ನೋಟ
ಮಧುವ ಹೀರಿದ ದುಂಬಿ ತಾ
ಧನ್ಯತೆಯಿಂ ನಮಿಸುತಿರೆ
ಮಧು ನೀಡಿದ ಹೂವಿಗೋ
ಭಾವಪ್ರಾಪ್ತಿ..!!
.
ಮುಂಜಾನೆ ನಡೆದಿತ್ತು
ಇಬ್ಬನಿಯ ಜೊತೆ ಸರಸ
ಮಧ್ಯಾಹ್ನ ಗಿಡದುಂಬಿ
ಹೂವು ಅರಳಿತ್ತು..!!
.
ಮಳಗಾಲದಾ ತುಂಬ
ಜೊತೆಗಿದ್ದ ಮೋಡಗಳು
ದೂರವಾದೊಡೆ ರವಿಗೆ
ವಿರಹಬಾಧೆ..!!
.
ಕಡಲ ನೀರನಿಗಳಿಗೆ
ಕಾವೇರಿ ಮೇಲೇರಿ
ರವಿಯನ್ನು ಚುಂಬಿಸುವ
ಆಕರ್ಷಣೆ..!!
.
ಹರಿಬಂದ ನದಿಯನ್ನು
ಒಡಲೊಳಗೆ ಕಾಪಿಟ್ಟು
ಮಮತೆಯನು ತೋರಿತ್ತು
ಮಲತಾಯಿ- ಶರಧಿ..!!
.
ಮಳೆಗೆ ಅರಳಿದೆ ಭೂಮಿ
ಇಳೆತುಂಬ "ಹಸಿರು"
ತನ್ನ "ಮಕ್ಕಳ" ಕಂಡು
ಸುಖಿಸಿತ್ತು ಮೋಡ..!!
.
ನಿಂತಿದ್ದ ಹುಲ್ಲುಗಳ
ನಲುಗಿಸಿತು ಗಾಳಿ..
ಚುಂಬನವೋ ಅಪ್ಪುಗೆಯೋ
ಅವಕೂ ತಿಳಿಯಲಿಲ್ಲ..!!
.
ಬಿದಿರ ಮೆಳೆಗಳ ನಡುವೆ
ತೀಡುವಾ ಶಬ್ಧ..
ತನ್ನದೇ ಸಂಗೀತಕೆ ಬಿದಿರು
ತಲೆದೂಗುತಿತ್ತು..!!
. . . . . . . ಸಖ್ಯಮೇಧ
ಅವಳು ಕೆಂಡಸಂಪಿಗೆ
ಕೆಂಡಸಂಪಿಗೆ ಕೊಯ್ದು
ಘಮದ ಹೂಗಳ ಆಯ್ದು
ಪಕಳೆಗಳ ತೇಯ್ದು
ಜಿನುಗೋ ನೀರನು ತೆಗೆದು
ಕೆಂಪು ಗಂಧವನುಳಿದು
ಕೊಂಚ ಚಂದನ ಬಳಿದು
ಜೊತೆಗೆ ಕೇಸರಿ ಅಳೆದು
ಬರುವ ಗಂಧದ ಹಿಟ್ಟಿನಲಿ
ಗೊಂಬೆಯೊಂದನು ಮಾಡೆ-
ಅವಳ ಬಣ್ಣವೇ ಬಂದಿತ್ತು..!
ಅವಳುಸಿರ ಘಮವಿತ್ತು!
.
ಕೆಂಡಸಂಪಿಗೆಯಂಥವಳು ..!
. . . . . . . ಸಖ್ಯಮೇಧ
ಕಣ್ಣು_ಕಾವ್ಯ
"ನಿನ್ನ ಕಂಗಳೆರಡು ಕಾವ್ಯಗಳು!"
ಅವನು ಬಾಯ್ತುಂಬ ಹೊಗಳಿದಾಗ
ಸಂತಸವಾದಂತೆ ನಟಿಸಿದಳು...
ಇರುಳ ತುಂಬ ನಿದ್ದೆಗೆಟ್ಟು
ಅವನ ಬರವು ಕಾಯುತ್ತಿದ್ದ ಕಂಗಳು
ಸತ್ಯ ಹೇಳುತ್ತಿದ್ದವು...
. . . . . ಸಖ್ಯಮೇಧ
ಕೆಂಡಸಂಪಿಗೆ ...
ಕೆಂಡಸಂಪಿಗೆ ನಕ್ಕು
ಹಾಲ್ಗಡಲು ಹರಿದಿಹುದು!
ಬೆರೆತಿಹುದು ಕೇಸರಿಯೂ
ಅವಳ ಘಮದಿಂದ..!
.
ನಾಜೂಕು ಜೋಕೊಂದ
ಅವಳಿಗುಸುರುವ ತನಕ
ಕೆಂಡಸಂಪಿಗೆ ಕಣ್ಣು
ಕಾಮನಾ ಬಿಲ್ಲು..!
.
ನನ್ನನ್ನು ತಾ ನಗಿಸಿ
ಒಳಗೊಳಗೆ ತಾ ನಗುವ
ಅವಳ ಹಾಲ್ಗೆನ್ನೆಯಲಿ
ರಂಗು ರಂಗೋಲಿ .!!
.
ಕಡಲೊಳಗೆ ಇಹುದಂತೆ
ಹವಳ ಮುತ್ತಿನ ರಾಶಿ
ಅವಳೂನು ಕಡಲೇನೆ!
ಸಂತಸದ ರಾಶಿ.!!
.
ಯಾವನೋ ಹೇಳಿದ್ದು
ನಕ್ಷತ್ರ ಬೀಳದು ಎಂದು
ಅವಳ ಕಣ್ಣಲಿ ಹೇಗೆ
ಬಂತು ಮತ್ತೆ..?
. . . . . . ಸಖ್ಯಮೇಧ
ಭಾವನೆ_ಬೆಲೆ
ನೆನಪುಗಳೆಂಬ ಕೊಪ್ಪರಿಗೆಗಳಲ್ಲಿ
ತುಂಬಿರುವ ಸವಿಕ್ಷಣಗಳೆಂಬ
ಅಗಾಧ ಸಂಪತ್ತುಗಳು
ಎಂದಿಗೂ
ಹೊತ್ತಿನ ಹಸಿವನ್ನೂ
ನೀಗಲಾರವು..!
ನನ್ನೋಳು
ಗಾಢಗಂಧದ ಮಗಳು ಈ ಕೆಂಡಸಂಪಿಗೆ...
ಬೆಳದಿಂಗಳಾ ಕುವರ ಆ ಚಂದ್ರಮ...
ಪಂಚವರ್ಣದ ಕೂಸು ನರ್ತಿಸುವ ನವಿಲು...
ಮುಗ್ಧಪ್ರೀತಿಯ ಕುವರಿ ಆಕೆ ನನ್ನಾಕೆ...!
. . . . . . . . . . ಸಖ್ಯಮೇಧ
January 05, 2015
ಬಡ್ಡೇಗೆ ಬರೆದಿದ್ದು...
"ನಗುವಾ ನಲಿವಾ ಓ ಕೆಂಡಸಂಪಿಗೆ ...
ನನಗೆ ಹದಿನೆಂಟು, ನಿನಗೆಷ್ಟೇ ಪ್ರಾಯ..?"
.
"ಹೇಳುವೆನು ಕೇಳು ಓ ಪ್ರಿಯತಮ...
ಹೂವಿಗೊಂದು ದಿವಸ; ಕಂಪಿಗೆ ಸಹಸ್ರಮಾನ...!"
. . . . ಸಖ್ಯಮೇಧ
ಕನಸು ಸೊಗಸು
ರಾತ್ರಿ ಕನಸಲಿ ಬಂದ ಕೆಂಡಸಂಪಿಗೆಯ
ಪರಿಮಳ ಬೆಳಿಗ್ಗೆಯೂ ಸೂಸುವುದು....
ರಾತ್ರಿ ಕನಸಲಿ ಬರುವ ನನ್ನಾಕೆ
ಬೆಳಿಗ್ಗೆ ಮನಸಲಿ ಕಚಗುಳಿ ಇಡುವಳು....
. . . . . . . . . . ಸಖ್ಯಮೇಧ
ಕೆಂಪು ಸಂಪಿ
ಕೆಂಡಸಂಪಿಗೆ ಬೇಕೆಂದು ನನ್ನವಳ ಹಟ...
ಈಗೆಲ್ಲಿ ಸಿಕ್ಕೀತು?! ಇದೊಳ್ಳೇ ಸಂಕಟ..
.
ಅವಳ ಮೊಗದಾ ಮುಂದೆ ಕನ್ನಡಿಯ ಹಿಡಿದೆ...
"ನೋಡು ಇವಳೇನೆ ಕೆಂಡಸಂಪಿಗೆ " ಎಂದೆ...
.
ನಾಚಿ ನಕ್ಕವಳ ಕೆನ್ನೆ ಕೆಂಪು ಕೆಂಪು...
ಅವಳ ನಗುವನು ನೋಡಿ ನನ್ನೆದೆಯೂ ತಂಪು...
. . . . . . . . ಸಖ್ಯಮೇಧ
ಕೆಂಡಸಂಪಿಗೆ
ನಾನವಳ "ಕೆಂಡಸಂಪಿಗೇ"....." ಎಂದು ಕರೆದೆ...
ಅವಳೆಂದಳು-
"ನಿನಗೆ ನನಗಿಂತ ಕೆಂಡಸಂಪಿಗೆ ಮೇಲೇ ಹೆಚ್ಚು ಪ್ರೀತಿ :/ "
. . . . . ಸಖ್ಯಮೇಧ
ಕೆಂಡಸಂಪಿಗೆ
ಗೆಳತೀ ,
ನಾ ನಿನಗೆ "ಕೆಂಡಸಂಪಿಗೆಯಂಥವಳು"
ಅಂತ ಹೇಳೋಲ್ಲ ಬಿಡು....
.
ಆಮೇಲೆ ಹೊಗಳಿಕೆಗೆ ನಾಚಿ ಕೆಂಡಸಂಪಿಗೆ
ಇನ್ನಷ್ಟು ಕೆಂಪಗಾಗಿಬಿಟ್ಟೀತು...!
-ಸಖ್ಯಮೇಧ
ಹೂ
ಹುಡುಗೀ...
ನಾನು ನಿನ್ನನ್ನು
"ಕೆಂಡಸಂಪಿಗೆಯಂಥವಳು"
ಅಂದಿದ್ದೇನೋ ನಿಜ....
ಆದರೆ ನೀನು
"ಹುಡುಗರು ಹೂವು ಬೇಡಬಾರದು"
ಅಂದಿದ್ದು ಯಾಕೆ....